ಗುರುವಾರ, ಆಗಸ್ಟ್ 11, 2016

ಮೊದಲ ದಿನ

ಎಂ. ಜಿ. ರಸ್ತೆಯಿಂದ ಮಟಮಟ ಮಧ್ಯಾಹ್ನ ೧೨ ಗಂಟೆಗೆ ಹರ್ಷ ತನ್ನ ’ಗ್ಲ್ಯಾಮರ್’ ಮೋಟರ್ ಸೈಕಲ್ ಏರಿ ಪ್ರಯಾಣ ಆರಂಭಿಸಿ, ಹೊಸೂರು ರಸ್ತೆಯ ಬೊಮ್ಮನಹಳ್ಳಿ ಕ್ರಾಸ್ ತಲುಪುವ ವೇಳೆಗೆ ಸಮಯ ೧೨.೫೫ ಆಗಿತ್ತು. ಮುಕ್ಕಾಲು ಗಂಟೆಯೊಳಗೆ ಜಿಗಣಿಯಲ್ಲಿರುವ ಮಗಳು ಸುಪ್ರಜಾ ಮನೆ ಸೇರುವೆನೆಂಬ ಅವನ ಲೆಕ್ಕಾಚಾರ ತಲೆಕೆಳಗಾಗಿತ್ತು..

ಸಮಯ ಎಷ್ಟೊಂದು ಬದಲಾಗಿದೆ ಎಂದು ಚಿಂತಿಸುವುದು ಹರ್ಷನಿಗೆ ಈಚಿನ ವರ್ಷಗಳಲ್ಲಿ ಮಾಮೂಲಾಗಿಬಿಟ್ಟಿದೆ. ಈಗ ಪ್ರಯಾಣಿಸಿರುವಷ್ಟು ದೂರಕ್ಕೆ ಅಂದು, ಇಂದು ತಗುಲುವ ಸಮಯದ ಅರ್ಧದಷ್ಟು ಸಾಕಾಗುತ್ತಿತ್ತು. ಇ-ಸಿಟಿ ಫ್ಲೈ-ಓವರ್ ಎಡ ಬದಿಯಲ್ಲಿ ಪದೇಪದೇ ನಿಲ್ಲುತ್ತ, ಕಿಕ್ಕಿರಿದ ವಾಹನಗಳ ಮಧ್ಯೆ ಕುಂಟುತ್ತ ಸಾಗಿ, ಕೇವಲ ೨೦೦ ಮೀಟರುಗಳ ಅಂತರದಲ್ಲಿದ್ದ ಬೇಗೂರು ರಸ್ತೆಗೆ ಅವನ ದ್ವಿಚಕ್ರ ವಾಹನವು ಬಂದು ಇಳಿದಾಗ ಸಮಯ ೧.೨೦!

ಅಲ್ಲಿಯೂ ತಪ್ಪದ ವಾಹನ ದಟ್ಟಣೆ. ಹರ್ಷನಂಥವರು ತಂತಮ್ಮ ವಾಹನಗಳನ್ನು ಮುಂದೆ ಸಾಗಿಸಲು ಪರದಾಡುತ್ತಿದ್ದಂಥ ಆ ವೇಳೆಯಲ್ಲಿ, ರಸ್ತೆಯಲ್ಲಿ ಆಟೋರಿಕ್ಷಾಗಳ ಹಾವಳಿಯೋ ಹಾವಳಿ. ಮುಂದಿನ ಚಕ್ರವನ್ನು ತೂರಿಸುವಷ್ಟು ಅಂತರ ದೊರೆತರೂ ಸಾಕು, ಕಾರುಗಳ ಮಧ್ಯೆ ನುಗ್ಗಿಬಿಡುವ ಹುನ್ನಾರ ಅವಕ್ಕೆ. ಆ ರಭಸಕ್ಕೆ ಬೆಚ್ಚಿ ಕಾರುಗಳು ತಮ್ಮ ನಡುವೆ ಅವು ಸಾಗಿ ಹೋಗಲು ದಾರಿ ಮಾಡಿ ಕೊಡುವ ದೃಶ್ಯ ಭಯಂಕರ. ಅಂಥ ದೃಶ್ಯಗಳನ್ನು ಹಿಂದೆ ಹಾಕಿ ಹರ್ಷ, ಸ್ವಲ್ಪವೇ ದೂರದಲ್ಲಿದ್ದ ಹೊಂಗಸಂದ್ರ ತಲುಪಿದಾಗ ಸಮಯ ೧.೪೫. 

ಆ ನಂತರ ರಸ್ತೆಯ ಗಿಜಿಗಿಜಿ ಅರ್ಧಕ್ಕರ್ಧ ಕಡಿಮೆಯಾದ್ದರಿಂದ ವಾಹನ ಚಾಲನೆ ಸರಾಗವೆನಿಸತೊಡಗಿತು. ಹೇಳಿದ ಸಮಯಕ್ಕೆ ಬಾರದ ತಂದೆಗೆ ಕರೆ ಮಾಡಿ, ವಿಳಂಬಕ್ಕೆ ಕಾರಣವನ್ನು ಆ ವೇಳೆಗೆ ಸುಪ್ರಜಾ ನಾಲ್ಕು ಬಾರಿ ವಿಚಾರಿಸಿಯಾಗಿತ್ತು. ’ರಸ್ತೆಯ ಗಲಿಬಿಲಿಯಷ್ಟೆ, ಆತಂಕ ಪಡುವ ಅವಶ್ಯಕತೆಯೇನಿಲ್ಲ’ - ಎಂದು ಹರ್ಷ ಉತ್ತರಿಸಿಯೂ ಆಗಿತ್ತು. 

ವಾಹನ-ಜನಸಂದಣಿ ಅದೇ ಪ್ರಮಾಣದಲ್ಲಿ, ಬೇಗೂರು-ಕೊಪ್ಪ ರಸ್ತೆಯು (ಇ-ಸಿಟಿಗೆ ತೆರಳುವ ಜನರ ಅನುಕೂಲಕ್ಕಾಗಿ) ಕವಲೊಡೆಯುವವರೆಗೂ ಮುಂದುವರಿಯಿತು. ಜನ-ವಾಹನವೆಲ್ಲವೂ ಇ-ಸಿಟಿ ದಿಕ್ಕಿಗೆ ಮುಖ ಮಾಡಿದ್ದರಿಂದ, ಜಿಗಣಿ ದಿಕ್ಕಿನ ರಸ್ತೆ ನಿರ್ಜನವಾಯಿತು. ಇನ್ನು ಅರ್ಧ ತಾಸಿನೊಳಗೆ ಮನೆ ಸೇರಬಲ್ಲೆನೆಂಬ ವಿಶ್ವಾಸ ಹರ್ಷನಲ್ಲಿ ಮನೆ ಮಾಡಿತು.

ಹೊಸ ಉತ್ಸಾಹದಿಂದ, ತನ್ನ ಸಹಜತೆಗಿಂತ ಹೆಚ್ಚು ವೇಗವಾಗಿ ಹರ್ಷ ವಾಹನವನ್ನು ಚಲಾಯಿಸಲಾರಂಭಿಸಿದ. ಒಂದೆರಡು ಕಿ. ಮೀ. ಸಾಗಿದ ತರುವಾಯ, ಲಘುವಾಗಿ, ತಲೆ ಸುತ್ತುತ್ತಿರುವ ಅನುಭವವಾಗತೊಡಗಿತು. ಬಿಸಿಲಿನ ಝಳ ಹೆಚ್ಚಾಗಿರುವುದೇ ಅದಕ್ಕೆ ಕಾರಣವೆಂದು ಹರ್ಷ ಭಾವಿಸಿದ. ತಲೆ ಸುತ್ತು ತೂರಾಟಕ್ಕೆ ಶುರುವಿಟ್ಟುಕೊಂಡಿತು. ವಾಹನ ಚಾಲನೆಯ ವೇಗವನ್ನು ತಗ್ಗಿಸಿ, ನಿಧಾನವಾಗಿ, ಹುಲ್ಲಹಳ್ಳಿಯ ಸಮೀಪದಲ್ಲಿದ್ದ ಕ್ರೈಸ್ಟ್ ಕಾಲೇಜನ್ನು ದಾಟಿದ.

ಬ್ರಾಡ್ ಎಸ್ಟೇಟ್ ಬಳಿ ಸಾರುವ ವೇಳೆಗೆ ಅನಿರೀಕ್ಷಿತವಾಗಿ ಪ್ರಜ್ಞಾಶೂನ್ಯತೆ ಹರ್ಷನನ್ನು ಆವರಿಸಿತು. ತನ್ನ ಮೇಲೆಯೇ ತನಗೆ ನಿಯಂತ್ರಣವಿಲ್ಲವಾಯಿತು. ತಾನು ಚಲಾಯಿಸುತ್ತಿದ್ದ ದ್ವಿಚಕ್ರಿಯ ಮೇಲಿನ್ನೆಲ್ಲಿಯ ನಿಯಂತ್ರಣ? ಅನಿಯಂತ್ರಿತ ಸ್ಥಿತಿಯಲ್ಲಿಯೇ ನೂರಿನ್ನೂರು ಮೀಟರ್ ಚಲಿಸಿದ ಆ ವಾಹನ, ರಸ್ತೆ ತಿರುವಿನಲ್ಲಿದ್ದ ನರ್ಸರಿಯ ಹೊರಗೋಡೆಗೆ ಬಡಿದು ಧರಾಶಾಯಿಯಾಯಿತು. ಗಾಡಿಯ ಸಮೇತ ಬಿದ್ದು ಅಂಗಾತನಾದ ಹರ್ಷನ ಪ್ರಜ್ಞೆ ಮರಳಲಿಲ್ಲ. ಶಿರಸ್ತ್ರಾಣವಿದ್ದುದರಿಂದ ತಲೆಗೆ ಪೆಟ್ಟಾಗಲಿಲ್ಲ. ಆದರೆ ಅವನ ಕಾಲುಗಳ ಮೇಲೆ ವಾಹನ ಮಗುಚಿಕೊಂಡಿದ್ದರಿಂದ, ಪ್ಯಾಂಟ್ ಹರಿದು ಒಂದು ಕಾಲಿಗೆ ಗಾಯವಾಗಿ ರಕ್ತ ಒಸರುತ್ತಿತ್ತು.

ಎರಚಿದ ಸಾಸುವೆಯ ಒಂದು ಕಾಳೂ ನೆಲದ ಮೇಲೆ ಚೆಲ್ಲಲಾರದೆಂಬಂಥ ಜಂಗುಳಿಯಲ್ಲಿ ಸುರಕ್ಷಿತವಾಗಿ ವಾಹನ ಚಲಾಯಿಸಿಕೊಂಡು ಬಂದಿದ್ದ ಹರ್ಷ, ಅಪರೂಪಕ್ಕೊಬ್ಬ ವ್ಯಕ್ತಿ - ಅರ್ಧ ಗಂಟೆಗೊಂದು ವಾಹನ ಪ್ರತ್ಯಕ್ಷವಾಗುವ ಈ ಸಮಯದಲ್ಲಿ, ಈ  ನಿರ್ಜನ ರಸ್ತೆಯ ಅಂಚಿನಲ್ಲಿ ಅದೆಷ್ಟೋ ಸಮಯ ನಿಶ್ಚೇಷ್ಟಿತನಾಗಿ ಮಲಗಿದ. ಕರೆಯ ನಂತರ ಕರೆಯ ಸದ್ದು ರಿಂಗಣಿಸುತ್ತಿದ್ದರೂ ಉತ್ತರಿಸುವವರಿಲ್ಲದೆ, ಅವನ ಸಮೀಪದಲ್ಲಿಯೇ ಅವನ ಮೊಬೈಲ್ ಫ಼ೋನ್ ಅನಾಥವಾಗಿ ಬಿದ್ದಿತ್ತು.

ಮಂಗಳವಾರ, ಆಗಸ್ಟ್ 9, 2016

ಮುನ್ನುಡಿ

ವಿಸ್ಮಯ!

ರ್ಷ ಆರೋಗ್ಯವಂತ. ದೈಹಿಕವಾಗಿಯಾಗಲೀ, ಮಾನಸಿಕವಾಗಿಯಾಗಲೀ ಕಿಂಚಿತ್ ಕೊರತೆಯಿಲ್ಲದಿರುವುದು ಅವನ ದಾಖಲೆ.

ಅಂಥ ಹರ್ಷ ಒಮ್ಮೆ ಪ್ರವಾಸದ ಮಧ್ಯೆ ಕುಸಿದು ಬಿದ್ದ. ಪ್ರಾಣ ಹೋಗದಿದ್ದರೂ ಪ್ರಜ್ಞೆ ಮರಳಲಿಲ್ಲ. ಜೀವಚ್ಛವವಾಗಿ ಒಂದು ಋಗ್ಣಾಲಯಕ್ಕೆ ದಾಖಲಿಸಲ್ಪಟ್ಟ. ನಿಶ್ಚೇಷ್ಟಿತನಾಗಿರುವಂತೆಯೇ ಹತ್ತು ದಿನಗಳ ಕಾಲ ಮುಂದುವರಿಯಿತು ಅವನ ಅಸ್ತಿತ್ವ. ಆ ಹತ್ತು ದಿನಗಳ ಕಾಲ ಅವನನ್ನು ಜೀವಂತವಾಗಿ ಉಳಿಸಿಕೊಳ್ಳಲು ಅನೇಕ ತಜ್ಞರು ನಡೆಸಿದ ಪರಿಶ್ರಮ ಒಂದು ವೈದ್ಯಕೀಯ ವಿಸ್ಮಯ.

ಆ ವಿಸ್ಮಯವನ್ನು ಶಬ್ದಜಾಲದಲ್ಲಿ ಹಿಡಿದಿಡುವ ಒಂದು ಸಾಧಾರಣ ಪ್ರಯತ್ನವೇ ಈ ಕಾದಂಬರಿ.

- ಬಿ. ಎಸ್. ರಂಗನಾಥ

ಮುಕ್ತ ವಿಚಾರ

ಸಾವಿನ ಹಂತ ತಲುಪಿದ್ದೆ. ಬದುಕಿಸಿಕೊಳ್ಳಲೇಬೇಕೆಂಬ ಸಂಕಲ್ಪದಿಂದ ಪತ್ನಿ ವಸಂತ, ಪುತ್ರಿ ಉಷಾ, ಅಳಿಯ ಬುದ್ದೇಶ್ ಮತ್ತು ಪುತ್ರ ರವಿ ನಿರಂತರ ಸೇವೆಗೈಯುತ್ತಿದ್ದಾರೆ. ಬದುಕಿದ್ದು, ಈ ವರ್ಷಾಂತ್ಯದೊಳಗೆ, ಈ ಕಾದಂಬರಿಯನ್ನು ಪೂರ್ಣಗೊಳಿಸುವೆನೆಂಬ ವಿಶ್ವಾಸ ಚಿಗುರೊಡೆಯುತ್ತಿದೆ.

ಕರೆಗಳು 

ದೂರವಾಣಿ ಕರೆಗಳಿಗೆ ಉತ್ತರ ನೀಡುವ ಸ್ಥಿತಿಯಲ್ಲಿ ನಾನಿಲ್ಲ. ದಯೆಯಿಟ್ಟು ಸಹಕರಿಸಿ. ಉತ್ತರ ನೀಡಬಲ್ಲವರ ಮೊಬೈಲ್ ಸಂಖ್ಯೆಗಳು ಇಂತಿವೆ:
ವಸಂತಕುಮಾರಿ:೯೦೩೫೭೧೨೬೬೬; ಉಷಾ: ೯೮೪೫೪೪೮೯೪೧; ಬುದೇಶ್: ೯೮೪೫೪೪೮೯೪೦: ರವಿ: ೯೬೬೩೭೩೧೩೫೭

ಅರ್ಪಣೆ















ಅಕ್ಕರೆಯ ಅಮ್ಮನಿಗೆ